ಬೈಯೆ
ದಕ್ಷಿಣ ಇಟಲಿಯ ಕಂಪೇನ್ಯ ಸ್ವಯಮಾಡಳಿತ ಪ್ರದೇಶದ ಒಂದು ಪ್ರಾಚೀನ ಪಟ್ಟಣ. ಪಾಟ್‍ಸ್ವಾಲೇ ಕೊಲ್ಲಿಯ ಪಶ್ಚಿಮ ತೀರದಲ್ಲಿ ನೇಪಲ್ಸಿನ ಪಶ್ಚಿಮಕ್ಕೆ ಸುಮಾರು 16 ಕಿಮೀ ಅಂತರದಲ್ಲಿದೆ. ಯುಲಿಸಿಸ್ಸನ ಹಡಗಿನ ಚುಕ್ಕಾಣಿಗನಾಗಿದ್ದ ಬೈಯೊ ಎಂಬವನ ಹೆಸರಿನ ಮೇಲೆ ಈ ಪಟ್ಟಣವನ್ನು ಹೆಸರಿಸಲಾಗಿದೆ. ಬೆಚ್ಚಗಿನ ಗಂಧಕ ನೀರಿನ ಒರತೆಗಳು ಹಚ್ಚ ಹಸಿರಿನ ಸಸ್ಯ ಸಂಪತ್ತು ಹಾಗೂ ಉತ್ತಮ ಹವಾಗುಣಗಳಿಂದ ಕೂಡಿದ ಈ ಪಟ್ಟಣ ರೋಮನ್ನರ ಕಾಲದಲ್ಲಿ ಒಂದು ಜನಪ್ರಿಯ ತಂಗುದಾಣವಾಗಿತ್ತು. ಇಲ್ಲಿ ಜೂಲಿಯಸ್ ಸೀಸರ್, ನೀರೊ ಮುಂತಾದ ಪ್ರಮುಖರ ಆರಾಮಗೃಹಗಳು ಇದ್ದುವು. ಸೀಸರನ ಅಚ್ಚುಮೆಚ್ಚಿನ ವಿಹಾರ ಸ್ಥಳ ಇದಾಗಿತ್ತೆಂದು ಹೇಳುವರು. ಪ್ರಾಚೀನ ಕಾಲದಲ್ಲಿ ಇದೊಂದು ಸುಖಭೋಗದ ಹಾಗೂ ಅನೈತಿಕ ವ್ಯವಹಾರಗಳ ಸ್ಥಳವೆಂದು ಪ್ರಖ್ಯಾತವಾಗಿತ್ತು. ಬೈಯೆಯ ದಕ್ಷಿಣಕ್ಕಿದ್ದ ಬೌಲೆ ಎಂಬಲ್ಲಿ ಪಾಂಪೆ ಮತ್ತು ವಾಕ್ಪಟುವಾಗಿದ್ದ ಕ್ವಿಂಟಸ್ ಹಾರ್ಟೆಂನ್ಸಿಯಸ್ ಅವರುಗಳ ಆರಾಮ ಗೃಹಳಿದ್ದುವು. 8ನೆಯ ಶತಮಾನದ ಹೊತ್ತಿಗೆ ಸರಾಸೆನ್ ಅರಬ್ಬರ ಆಕ್ರಮಣಕ್ಕೆ ಬೈಯೆ ತುತ್ತಾಯಿತು. 1500ರಲ್ಲಿ ಬಂದ ಭಯಂಕರ ಮಲೇರಿಯಾದಿಂದಾಗಿ ಇದು ನಿರ್ಜನವಾಗಿ ಹೋಯಿತು. ಈಗಲೂ ಗತವೈಭವದ ಹಲವು ಸ್ಮಾರಕಗಳನ್ನು ಬೈಯೆಯಲ್ಲಿ ನೋಡಬಹುದು ಅವುಗಳಲ್ಲಿ ವೀನಸ್, ಮಕ್ರ್ಯುರಿ ಹಾಗೂ ಡಯಾನಾ ದೇವತೆಗಳ ದೇವಾಲಯಗಳನ್ನು ಹೆಸರಿಸಬಹುದು. ಪ್ರಾಚೀನ ರೋಮನ್ ಸಾಮ್ರಾಜ್ಯದ ಗಚ್ಚುಗಾರೆ ಶಿಲ್ಪ ರಚನೆಯ ನವ ಅಟ್ಟಿಕ್ ಶಿಲ್ಪಗಳೆಂದು ಹೆಸರಾದ ಹಲವು ಮೂರ್ತಿಶಿಲ್ಪಗಳನ್ನೂ ಇಲ್ಲಿ ಶೋಧಿಸಲಾಗಿದೆ.
(ಎಚ್.ಆರ್.ಆರ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ